ಮೊನ್ನೆ , ಶುಕ್ರವಾರ ಫೋನು ಮಾಡಿದವು ನಮ್ಮ ಕೃಷ್ಣ ಕುಮಾರ ಸರ್. ಕುದುರೆಮುಖಕ್ಕೆ ಹೋಪಲಿದ್ದು, ಬತ್ತೆಯ ಮಾಣಿ ಸಂಗಾತಕ್ಕೆ ಹೇಳಿಗೊಂಡು. ಅವು ಆರು ಗೊಂತಾತೊ? ಅದೇ ನಮ್ಮ ಸಾರಡಿ ತೋಡಿಲೇ ಒಂದು ಒಂದೂವರೆ ಮೈಲು ಮೇಗಂತಾಗಿ ಹೋದರೆ ಗುಳಿಮನೆ ಹೇಳಿ ಇದ್ದನ್ನೆ, ಅಲ್ಲೆ ಇಪ್ಪದು. ಅವು ಈಗ ಕೊಡೆಯಾಲದ ದೊಡ್ಡ ಕೋಲೇಜಿಲಿ ಪ್ರೊಫೆಸರ್ ಅಡ. ನಮ್ಮ ಒಪ್ಪಣ್ಣ ಮದಲಿಂಗೆ ಕೋಲೇಜಿಂಗೆ ಹೋಪಗ ಕಂಡು ಗೊಂತಿಕ್ಕು ಅವರ. ಗೆಡ್ಡ ರಜಾ ಇಪ್ಪ ಮಾಷ್ಟ್ರ.
ಹಾಂಗೆ ಹೆರಟತ್ತದಾ ನಾವುದೇ. ಹೇಂಗೂ ಕೆಮ್ಕಕ್ಕೆ ರಜೆ. ಮನೆಲಿ ಆಳುಗೊ ಕೂಡಾ ಇಲ್ಲೆ. ಗೋಂದೋಳು ಅಡ ಆ ನಾಯ್ಕನಲ್ಲಿ. ನಮ್ಮ ಬೈಕ್ಕಿಲೇ ಹೋದ್ದದು. ಕೊಡೆಯಾಲಾಗಿ ಮೂಡಬಿದ್ರೆಯಾಗಿ ಬಜಗೋಳಿಯಾಗಿ ಕುದ್ರೆಮುಖ. ಎಂತಾ ಲಾಯ್ಕ ಮಾರ್ಗ ಗೊಂತಿದ್ದಾ? ಆಹಾ.... ನಮ್ಮ ಪುಟ್ಟಕ್ಕನ ಕೆಪ್ಪಟೆಯ ಹಾಂಗೆ... ಭಾರೀ ನೈಸು.
ವಿಶಯಕ್ಕೆ ಬಪ್ಪ... ಹೋದ್ದದು ಎಂತಕೆ ಹೇಳಿತ್ತು ಕಂಡ್ರೆ, ಮಾಷ್ಟ್ರಿಂಗೆ ಒಂದು ಸೆಸಿ ಹುಡ್ಕುಲೆ. ಆ ಸೆಸಿ ಇಷ್ಟ್ರವರೆಗೆ ಆರೂ ನೋಡದ್ದ ಸೆಸಿಯಡ. ಸಸ್ಯ ಪ್ರಪಂಚಕ್ಕೇ ಹೊಸತ್ತಡ. ಭರ್ತಿ ಒಂದೂವರೆ ಇಂಚು ಉದ್ದವೂ, ಒಂದು ಹಿಡಿಸೂಡಿ ಕಡ್ಡಿಯಷ್ಟಕ್ಕೆ ತೋರವೂ ಇಪ್ಪ, ಎಲೆ ಗೆಲ್ಲು ಹೂಗು ಎಂತದೂ ಇಲ್ಲದ್ದ ಒಂದು ಸೆಸಿ. ಅಂದು ಐದಾರು ಒರ್ಶ ಹಿಂದೆ ಒಂದಾರಿ ಹೋಗಿಪ್ಪಗ ಕಂಡದಡ ಅವು ಅದರ. ನಂತರ ಪುಸ್ತಕಂಗಳಲ್ಲಿ ಹುಡ್ಕುವಾಗ ಅದರ ಬಗ್ಗೆ ಏವದೇ ವಿವರ ಸಿಕ್ಕಿದ್ದಿಲ್ಲೆಡ. ಹಾಂಗಾಗಿ ಅವು ಅದರ ಬಗ್ಗೆ ಇಂಟ್ರೆಷ್ಟು ತೆಕ್ಕೊಂಡು ಪ್ರತೀ ಒರ್ಶವೂ ಈ ಸೀಸನಿಲಿ ಹೋಗಿ ನೋಡ್ತಾ ಇಪ್ಪದು. ಅದು ಸಿಕ್ಕಿರೆ ಸಸ್ಯ ವಿಜ್ನಾನ ಪ್ರಪಂಚಲ್ಲಿ ಅವರ ಹೆಸರು ಎತ್ತರಕ್ಕೆ ಹೋವ್ತು, ಅದರೊಟ್ಟಿಂಗೆ ಮಾಣಿಯ ಹೆಸರೂ ಬಕ್ಕು ಹೇಳಿ ಒಂದು ಆಶೆ ಇದಾ... ಹ್ಹೆ ಹ್ಹೆ ಹ್ಹೆ...
ಕುದ್ರೆಮುಖ ಚರ್ಚಿನ ಹಿಂದೆ ಇಪ್ಪ ಶೋಲಾ ಕಾಡಿಲಿ ಇಳುದು ಹುಡ್ಕುವ ಕೆಲಸ... ಇದೆಂತರ ಪಿಲ್ಮಿನ ಹೆಸರು ಹೇಳಿ ಕನ್ಪ್ಯೂಸು ಆಯಿಕ್ಕೆಡಿ. ಶೋಲಾ ಹೇಳಿರೆ ಎರಡು ಗುಡ್ಡಗ ಜೋಯಿಂಟ್ ಅಪ್ಪ ಜಾಗೆಲಿ ಬೆಳದಿಪ್ಪ ಸಪೂರದ ಕಾಡು, ಅದರ ನಡೂಕೆ ಸಪೂರದ ನೀರ ತೋಡು ಇರ್ತು.. ಚಿತ್ರಲ್ಲಿ ನೋಡಿ.(ಪರ್ವತ ಯೋನಿ ಹೇಳಿ ಅದಕ್ಕೆ ಸಂಸ್ಕೃತಲ್ಲಿ ಹೇಳ್ತವಡ. ಎನಗೆ ಒಪ್ಪಣ್ಣ ಹೇಳಿದ್ದು) ಆ ಕಾಡು ಬರೇ ಹತ್ತನ್ನೆರಡು ಮೀಟರು ಅಗಲ ಇದ್ದರೂ ಅಲ್ಲಿಪ್ಪ ಕಾಡು, ಪೊದೆ, ಮರ, ಬಳ್ಳಿ, ಗೆಡು, ಹುಲ್ಲು ಹೇಂಗೆ ಬೆಳದಿರ್ತು ಹೇಳಿದರೆ ಅದರ ಒಳಂಗೆ ಹೊಗ್ಗೆಕಾರೇ ಸುಮಾರು ಹೊತ್ತು ಆಯಿದು. ಬಗ್ಗಿ ಮನುಗಿದ ಹಾಂಗೆ ಮಾಡಿ ಹರಕ್ಕೊಂಡು ಎರಡೂ ಕೈಲಿ ಬಲ್ಲೆ ಪೊದೆ ಒಂದುಸಿಗೊಂಡು ನೀರಿಲಿ ಮೀಂದಿದ ಹಾಂಗೆ ಮಾಡಿಗೊಂಡು ಒಳ ನುಗ್ಗೆಕ್ಕಾರೆ ಸಾಧಾರಣ ಹತ್ತು ವರ್ಷ ಹಿಂದೆ ಕಲ್ತ ಮಂತ್ರಂಗೊ ಎಲ್ಲಾ ಬಾಯಿಲಿ ಬಪ್ಪಲೆ ಸುರು ಆಯಿದು.
ಉಂಬುರುದೇ ಇತ್ತು ಮಾರಾಯ ಅಲ್ಲಿ, ಎನ್ನ ಕಾಲು ಪೂರಾ ಲಗಾಡಿ. ಅವು ಹತ್ತಿದರೆ ಗೊಂತೇ ಆವ್ತಿಲ್ಲೆ. ತಣ್ಣಂಗೆ ಸಣ್ಣ ಹುಳುಗೊ... ಗೊಂತಿಕ್ಕಲ್ದಾ ಉಂಬುರು/ಉಂಬುಳು/ಲೀಚ್ ಹೇಳಿರೆ. ನೆತ್ತರು ಹೀರ್ತ ಹುಳುಗೊ. ಕಚ್ಚಿದರೆ ಬಿಡ್ತವೇ ಇಲ್ಲೆ. ಈಚ ಬೆರಳಿಂದ ಆಚ ಬೆರಳಿಂಗೆ, ಅಲ್ಲಿಂದ ಇಲ್ಲಿಗೆ, ಅಂತೂ ತೊಲಗವು. ಅವು ನೆತ್ತರು ಕುಡುದು ಸುಮ್ಮನೆ ಇರ್ತವಾ? ಹಾಳು ಕೂಡಾ ಮಾಡ್ತವು. ಅವು ಕಚ್ಚಿದ ಜಾಗೆಲಿ ನೆತ್ತರು ಕಟ್ಟುತ್ತಿಲ್ಲೆ, ಹೋವ್ತಾ ಇರ್ತು. ಅದೆಂತದೋ ಎನ್ಜೈಮ್ ಅಡ. ಬ್ಲಡ್ ಕ್ಲೊಟ್ ಆಗದ್ದ ಹಾಂಗೆ ಮಾಡ್ತದು. ಮದ್ದಿಂಗೂ ಉಪಯೋಗ್ಸುತ್ತವಡ ಉಂಬುರುಗಳ, ನಮ್ಮ ಮಿಂಚುಳ್ಳಿ ಅಕ್ಕನತ್ತರೆ ಕೇಳಿರೆ ಹೇಳುಗು, ಅದಕ್ಕೆ ಆಯುರ್ವೇದ ಎಲ್ಲಾ ರಜ ರಜ ಗೊಂತಿದ್ದಡ. ಅಂತೂ ನೆತ್ತರು ಅರಿಶಿಗೊಂಡು ಹುಡ್ಕಿದೆಯೋ.
ಆದರೆ ಅದರ ಹುಡ್ಕುತ್ತ ಕಶ್ಟ ಮಾತ್ರ ಎನ್ನ ಅಜ್ಜಂಗೂ ಬೇಡ ಮಾರಾಯಾ... ಪುಟ್ಟಕ್ಕನ ತಲೆಂದ ಹೇನು ಹುಡ್ಕಿದ ಹಾಂಗೆ ಹುಡ್ಕಿದೆಯೋ, ಮೂರೂವರೆ ಗಂಟೆ ಹೊತ್ತು. ನಯಾ ಪೈಸೆ ಪ್ರೇಜನ ಆಯಿದಿಲ್ಲೆ :-( (ಪುಟ್ಟಕ್ಕ ಎನಗೆ ಬಡಿವದು ಬೇಡ, ಹೇನಿಲ್ಲೆ ಹೇಳಿ ಅರ್ತ) ಮತ್ತೆ ಅಂತೆಯಾ ಮಾಡಿದ್ದು ಹಿರಿಯೋರು ಗಾದೆ... ಬೆಳುಗುಲ್ಲ ಮೊಟ್ಟೆಲಿ ಅದೆಂತದೋ ಹುಡ್ಕಿದ ಹಾಂಗೆ ಹೇಳಿ?
ಹಾಂಗೆ ಹೋಗಿಪ್ಪಗ ಅಂತೇ ಬಪ್ಪಲಾವ್ತಾ? ಅಲ್ಲಿ ಸುತ್ತಮುತ್ತ ನೋಡೆಕ್ಕಿದಾ, ಮಾಣಿಗೆ ಹೊಸತ್ತಲ್ದಾ? ಹಾಂಗೆ ಕರಕ್ಕೊಂಡು ಹೋದವು ಅಲ್ಲೇ ಮುಂದೆ ನೆಲ್ಲಿಬೀಡು ಹೇಳ್ತಲ್ಲಿಂಗೆ, ಮೈನಿಂಗ್ ಅಪ್ಪ ಜಾಗಗೆ, ಪಾರ್ಕಿಂಗೆ, ಹಾಂ... ಮತ್ತೆ ಅಲ್ಲಿ ಒಂದು ಡ್ಯಾಂ ಇದ್ದು, ಅಣೆಕ್ಕಟ್ಟ. ಅಬ್ಬಾ... ಎಷ್ಟು ದೊಡ್ಡ ಇದ್ದು ಗೊಂತಿದ್ದಾ? ನಮ್ಮ ಸಾರಡಿ ತೋಡಿನ ಕಟ್ಟ ಏವ ಮೂಲಗೂ ಇಲ್ಲೆ ಅದರ ಎದುರು. ಅದರ ಹೆಸರು ಲಕ್ಯಾ ಡ್ಯಾಂ ಹೇಳಿ. ಪೊಲ್ಯುಷನ್ ಕಂಟ್ರೋಲ್ ಡ್ಯಾಂ, ಹೇಳಿರೆ ಮಾಲಿನ್ಯ ಆಗದ್ದಹಾಂಗೆ ತಡವ ಕಟ್ಟ. ಅದರ್ಲಿ ತುಂಬಾ ಮಣ್ಣೇ ಕಾಂಬದು. ಅಣೆಕಟ್ಟ ಹೇಳಿರೆ ನವಗೆ ನೆಂಪಪ್ಪದು ನೀರು ತುಂಬಿ ತುಳುಂಕುವ ಕಟ್ಟ ಅಲ್ದಾ? ಚಿತ್ರ ನೋಡಿ... ಬರೇ ಮಣ್ಣು ತುಂಬಿ ಕ್ರಿಕೇಟು ಮೈದಾನ ಆದ ಕಟ್ಟ. ಗಣಿಗಾರಿಕೆಯ ಕೆಸರು ಕೆಳ ಹೋಗದ್ದ ಹಾಂಗೆ ತಡವಲಿಪ್ಪ ಕಟ್ಟ ಹೇಳಿ ಕಾಣ್ತು ಅದು. ಪಟ ತೆಗೆಯುವುದು ನಿಷೇಧಿಸಲಾಗಿದೆ ಹೇಳಿದವು ಅಲ್ಲಿಪ್ಪ ಮೂಡ್ಲಾಗಿಂದ ಬಂದ ಹಿಂದಿ ಮಾತಾಡ್ತ ಗಾರ್ಡುಗೊ. ಆದರೆ ನಿಂಗೊಗೆ ಗೊಂತಿದ್ದನ್ನೆ, ಕೆಮರ ಬಿಟ್ಟರೆ ಮಾಣಿ ಮರ ಬಿಟ್ಟ ಮಂಗನ ಹಾಂಗೆ ಆವ್ತ ಹೇಳಿ... ಹ್ಹೆ ಹ್ಹೆ ಹ್ಹೆ.
ನಾವು ಬದ್ಕಿಪ್ಪದೇ ಪರಿಸರಂದಾಗಿ. ನಿಜವಾಗಿ ಅದರ ಒಳಿಶಿಗೊಂಡು ಉಪಯೋಗ್ಸಿಗೊಂಡು ಪೂರಕವಾಗಿ ಜೀವನ ಮಾಡೆಕ್ಕಾದ್ದು ಕ್ರಮ. ದುರಾಸೆಂದಾಗಿ ನಾವು ಅದರ ಕೊಂದು, ತಿಂದು ಜೀವನ ಮಾಡ್ತಾ ಇದ್ದು. ಪೈಸಗೆ ಬೇಕಾಗಿ ಜೀವ ಕೊಟ್ಟ ಅಬ್ಬೆಯನ್ನೂ ಮಾರುವ ಬುದ್ದಿ. ಮಾಣಿ ಉದಾಸನ ಅಪ್ಪಗ ಒಂದೋಂದರಿ ಹೇಳುದಿದ್ದು ಪುಟ್ಟಕ್ಕನತ್ತರೆ, ಈ ಪ್ರಪಂಚಲ್ಲಿ ಆರಿಂಗೂ ಉಪಯೊಗ ಇಲ್ಲದ್ದ ಮತ್ತು ಪ್ರತಿಯೊಂದು ಜೀವರಾಶಿಗೂ ಪರಿಸರಕ್ಕೂ, ಚರಾಚರ ವಸ್ತುಗೊಕ್ಕೂ ತೊಂದರೆ ಮಾತ್ರ ಕೊಡುವ ಜೀವಿ ಹೇಳಿ ಒಂದಿದ್ದರೆ ಅದು ಮನುಶ್ಯ ಮಾಂತ್ರ ಹೇಳಿ. ಆಲೋಚನೆ ಮಾಡಿ ನಿಂಗಳೇ, ಮನುಶ್ಯ ಈ ಪ್ರಪಂಚಂದ ಮಾಯ ಆಗಿ ಹೋದರೆ ಪರಿಸರದ ಆಗು ಹೋಗುಗೊಕ್ಕೆ ಯೇವದೇ ತೊಂದರೆ ಇಲ್ಲೆ(ಫುಡ್ ಚೈನ್, ಬಯೋಲೋಜಿಕಲ್ ಲಿಂಕ್ಸ್), ಮನುಶ್ಯ ಇದ್ದರೇ ತೊಂದರೆ.
ಕುದುರೆಮುಖದ ಅವಸ್ತೆ ಗೊಂತಿದ್ದನ್ನೆ ನಿಂಗೊಗೆಲ್ಲಾ, ಆ ಗಣಿಗಾರಿಕೆ, ಮಾಲಿನ್ಯ, ಧೂಳು, ಪರಿಸರ ನಾಶ, ಇತ್ಯಾದಿ ಇತ್ಯಾದಿ. ಏವ ದೇವರು ಬುದ್ದಿ ಕೊಟ್ಟದೋ ಗೊಂತಿಲ್ಲೆ. ಈಗ ಅದೆಲ್ಲಾ ನಿಂದಿದು. ನಿಧಾನಕ್ಕೆ ವನದೇವತೆಯ ಗಾಯ ಕೂಡಿಗೊಂಡು ಬತ್ತಾ ಇದ್ದು. ಅಲ್ಲಲ್ಲಿ ಹಸುರು ಹುಲ್ಲು ಬೆಳೆತ್ತಾ ಇದ್ದು ಗಣಿಗ ಇತ್ತ ಜಾಗೆಲಿ.
ನಾವೆಲ್ಲಾ ಇನ್ನೂ ಕಲಿವದು ಬಾಕಿ ಇದ್ದು.
Shodha Vijaya book – For Free download read
5 weeks ago